ನೆಪ್ಚೂನ್
ಸೌರವ್ಯೂಹದ ಎಂಟನೆಯ ಗ್ರಹ. ಸೂರ್ಯನಿಂದ ತೊಡಗಿ ಆರೋಹೀ ದೂರಾನುಸಾರ ಇರುವ ಗ್ರಹಗಳಿವು; ಬುಧ ಶುಕ್ರ ಭೂಮಿ ಮಂಗಳ ಗುರು ಶನಿ ಯುರೇನಸ್ ನೆಪ್ಚೂನ್ ಪ್ಲೂಟೋ. ಶನಿಯವರೆಗಿನ ಆರು ಗ್ರಹಗಳು ದೃಗ್ಗೋಚರವಾಗಿವೆ; ಮುಂದಿನ ಮೂರು ದೃಗಗೋಚರ ಎಂದೇ ಪ್ರಾಚೀನ ಮಾನವನಿಗೆ (ಹದಿನೆಂಟನೆಯ ಶತಮಾನದ ತನಕವೂ) ಸೌರವ್ಯೂಹದಲ್ಲಿ ಆರು ಗ್ರಹಗಳು ಮಾತ್ರ ತಿಳಿದಿದ್ದವು.

	ದೃಗಗೋಚರ ಗ್ರಹಗಳನ್ನು ಪತ್ತೆಮಾಡಲು ಅವುಗಳ ಸಂಭಾವ್ಯ ಸ್ಥಾನಗಳನ್ನು ಗಣನೆಮಾಡಿ ತಿಳಿಯಬೇಕು ಹಾಗೂ ಆ ಸ್ಥಾನಗಳಲ್ಲಿ ಅವನ್ನು ಸೂಕ್ಷ್ಮ ಛಾಯಾ ಚಿತ್ರಗಳ ನೆರವಿನಿಂದ ಹುಡುಕಬೇಕು. ಆದ್ದರಿಂದ ಗಣಿತಗಣನೆಯಲ್ಲಿ ಮತ್ತು ಯುಕ್ತ ತಂತ್ರವಿದ್ಯೆಯಲ್ಲಿ ಸಾಕಷ್ಟು ಪ್ರಗತಿಯಾದ ವಿನಾ ಇವುಗಳ ಇರುವಿನ ಅರಿವು ಮೂಡದಿದ್ದುದು ನಿರೀಕ್ಷಿತವೇ.

	ಯುರೇನಸ್ ಗ್ರಹವನ್ನು 1781ರಲ್ಲಿ ಆವಿಷ್ಕರಿಸಲಾಯಿತು. ಮುಂದೆ ಅದರ ಭೌತವಿವರಗಳನ್ನು ಗಣಿಸಿ ನಿರ್ಧರಿಸಿದರು: ಸೂರ್ಯ-ಯುರೇನಸ್ ಸರಾಸರಿ ಅಂತರ 28.696 ಲಕ್ಷ ಕಿಮೀ (19.18 ಖಗೋಳ ಮಾನಗಳು; 1 ಖಮಾ= 1,496 ಲಕ್ಷ ಕಿಮೀ; ಇದು ಸೂರ್ಯ-ಭೂಮಿ ಸರಾಸರಿ ಅಂತರ); ಯುರೇನಸಿನ ಒಂದು ವರ್ಷ (ಸೂರ್ಯನನ್ನು ಒಮ್ಮೆ ಪರಿಭ್ರಮಿಸಲು ಬೇಕಾಗುವ ಅವಧಿ) 84.01 ಭೂಮಿ ವರ್ಷಗಳು; ಸರಾಸರಿ ಕಕ್ಷಾವೇಗ ಸೆಕೆಂಡಿಗೆ 6.8 ಕಿಮೀ ಇತ್ಯಾದಿ. ಯುರೇನಸಿನ ಲಭ್ಯ ಮಾಹಿತಿಗಳನ್ನು ಅನ್ವಯಿಸಿ ಇದರ ಭವಿಷ್ಯ ಸ್ಥಾನಗಳನ್ನು ನಿರ್ಧರಿಸಿದರು. ಆದರೆ ವೀಕ್ಷಣೆ ತಿಳಿಸಿದ ಸಂಗತಿ ಬೇರೆಯೇ: ಗಣನೆ ಸೂಚಿಸಿದ ಸ್ಥಾನಗಳಲ್ಲಿ ಯುರೇನಸ್ ಇರಲಿಲ್ಲ, ಸ್ಥಾನವಿಚಲನೆಗೊಂಡಿತ್ತು. ಈ ವಿಚಲನೆಯ ಕಾರಣವೇನೆಂದು ತಪಾಸಣೆ ಮಾಡಿದರು. ಯುರೇನಸಿನಿಂದ ಆಚೆಯ, ಅಂದರೆ ಸೂರ್ಯ-ಯುರೇನಸ್ ಅನಂತರದ ಹೊರಗಿನ, ಅಜ್ಞಾತ ಬಲಕೇಂದ್ರವೊಂದರ ಆಕರ್ಷಣ ಪ್ರಭಾವ ಇದೆಂದು ತಿಳಿಯಿತು. ಆ ಬಲಕೇಂದ್ರದ ನೆಲೆ, ತೀವ್ರತೆ ಮೊದಲಾದ ವಿವರಗಳನ್ನು ಗಣಿಸಲು ಜಾನ್ ಆ್ಯಡಮ್ಸ್ (1810-92) ಎಂಬ ತರುಣ ಇಂಗ್ಲಿಷ್ ಗಣಿತವಿದ ಕಣಕ್ಕೆ ಇಳಿದ (1843). ಯುರೇನಸ್ ಪತ್ತೆ ಆದಂದಿನಿಂದ (1781) ಆ ತನಕದ (1843) ಗಣನೆ ಹಾಗೂ ವೀಕ್ಷಣೆಗಳು ಒದಗಿಸಿದ ಧಾತುಗಳನ್ನು ಆತ ಅಧ್ಯಯನಮಾಡಿದ. 1822ರ ತನಕ ಯುರೇನಸಿನ ಕಕ್ಷಾವೇಗ ಉತ್ಕರ್ಷಿತವಾಗಿತ್ತೆಂದೂ ಅಲ್ಲಿಂದ ಮುಂದೆ ಅಪಕರ್ಷಿತವಾಯಿತೆಂದೂ ತಿಳಿಯಿತು. ಸೂರ್ಯ, ಅಜ್ಞಾತಬಲಕೇಂದ್ರ ಇವುಗಳ ನಡುವೆ 1822ರ ಸುಮಾರಿಗೆ ಯುರೇನಸ್ ಬಂದುದೇ ಈ ಸ್ಥಿತಿಬದಲಾವಣೆಯ ಕಾರಣವೇನೆಂದು ಆ್ಯಡಮ್ಸ್ ತೀರ್ಮಾನಿಸಿದ. ಕೇವಲ ಗಣನೆಗಳ ಆಧಾರದಿಂದ ಆ್ಯಡಮ್ಸ್ ಹೊಸ ಗ್ರಹವನ್ನು (ಅಜ್ಞಾತಬಲ ಕೇಂದ್ರ) ಆಕಾಶದಲ್ಲಿ ಎಲ್ಲಿ ಅರಸಬೇಕು ಎಂಬುದರ ವಿವರಗಳನ್ನು ನಿರ್ಧರಿಸಿ ಬ್ರಿಟಿಷ್ ರಾಜ-ಖಗೋಳವಿಜ್ಞಾನಿ ಸರ್ ಜಾರ್ಜ್ ಏರಿಗೆ ರವಾನಿಸಿದ (ಅಕ್ಟೋಬರ್ 1845). ಉಚ್ಚ ವೇಧಶಾಲೆಯ ಸೂಕ್ಷೋಪಕರಣಗಳ ನೆರವಿನಿಂದ ಮಾತ್ರ ಗ್ರಹವನ್ನು ಗುರುತಿಸುವುವು ಸಾಧ್ಯವಾಗಬಹುದಾದ್ದರಿಂದ ಏರಿಯ ಸಹಕಾರ ಇದಕ್ಕೆ ಅವಶ್ಯವಾಗಿತ್ತು. ಆದರೆ ಏರಿಗೆ ಆ್ಯಡಮ್ಸ್‍ನಂಥ ತರುಣನ ನಿಜಸಾಮಥ್ರ್ಯದ ಬಗ್ಗೆ ಭರವಸೆ ಇರದ್ದರಿಂದ ಆತನ ಯೋಗ್ಯತೆಯನ್ನು ಒರೆಹಚ್ಚಲು ಸುಲಭವಾದ ಒಂದು ಸಮಸ್ಯೆಯನ್ನು ಆ್ಯಡಮ್ಸ್‍ನ ಎದುರಿಟ್ಟ. ಈ ಸವಾಲಿಗೆ ಆ್ಯಡಮ್ಸ್ ಉತ್ತರ ನೀಡದ್ದರಿಂದ ಏರಿ ಈ ಸೂಚಿತ ವೀಕ್ಷಣೆಯ ಕಡೆ ಗಮನ ಹರಿಸಲಿಲ್ಲ.

	ಇತ್ತ ಅದೇ ಸುಮಾರಿಗೆ ಆರ್ಬೇನ್ ಯಾನ್ ಜೋಸೆಫ್ ಲೇವೇರ್ಯೇ (1811-77) ಎಂಬ ಫ್ರೆಂಚ್ ಗಣಿತವಿದ, ಆ್ಯಡಮ್ಸ್ ನಡೆಸಿದ ಸಂಶೋಧನೆಯ ಬಗ್ಗೆ ಪೂರ್ವ ಸೂಚನೆ ಇಲ್ಲದೆ, ಸ್ವತಂತ್ರವಾಗಿ ಇದೇ ಸಮಸ್ಯೆಯನ್ನು ಎತ್ತಿಕೊಂಡು ಪರಿಹರಿಸಿದ (ಜೂನ್ 1846). ಇದನ್ನು ಗಮನಿಸಿದ ಏರಿ ಆ್ಯಡಮ್ಸ್ ಪರಿಹಾರಕ್ಕೂ ಲೇವೇರ್ಯೇಯ ಪರಿಹಾರಕ್ಕೂ ಇದ್ದ ನಿಕಟ ಹೊಂದಾಣಿಕೆಗೆ ಅಚ್ಚರಿಪಟ್ಟ. ಅದೇ ಹಿಂದಿನ ಸರಳ ಸಮಸ್ಯೆಯನ್ನು ಲೆವೇರ್ಯೆಗೂ ತಿಳಿಸಿದ. ಇವನು ಅದನ್ನು ಒಡನೆ ಸರಿಯಾಗಿ ಬಿಡಿಸಿ ಅದರ ಒಡಪನ್ನು ಏರಿಗೆ ರವಾನಿಸಿದ. ಇದರಿಂದ ಪ್ರಭಾವಿತನಾದ ಏರಿ ಈಗ ಕೇಂಬ್ರಿಜ್ ವೇಧಶಾಲೆಯ ನಿರ್ದೇಶಕನಾಗಿದ್ದ ಜೇಮ್ಸ್ ಚಾಲಿಸನಿಗೆ ಈ ನೂತನ ಗ್ರಹವನ್ನು ಲೇವೇರ್ಯೇ ಸೂಚಿಸಿದ ತೆರನಾಗಿ ವೀಕ್ಷಿಸಿ ವರದಿ ಮಾಡಲು ಆದೇಶವಿತ್ತ. ಹೊಸ ಗ್ರಹ ಕುಂಭರಾಶಿಯಲ್ಲಿ ಇರಬೇಕು ಎಂಬುದು ಗಣನೆಯಿಂದ ತಿಳಿದು ಬಂದಿದ್ದ ಅಂಶ. ಆ ವಲಯದ ಛಾಯಾಚಿತ್ರಗಳನ್ನು ಚಾಲಿಸ್ ತೆಗೆದು ಸಂಸ್ಕರಿಸಿದ. ಆದರೆ ಅವನು ಚಿತ್ರಗಳನ್ನು ಪರಿಶೀಲಿಸುವಾಗ ವೈಯಕ್ತಿಕವಾಗಿ ಸಾಕಷ್ಟು ಸೂಕ್ಷ್ಮಗ್ರಾಹಿ ಆಗಿರದಿದ್ದುದರಿಂದ ಗ್ರಹ ಅದರಲ್ಲಿ ಸಾಕ್ಷಾತ್ತಾಗಿ ಪಡಿಮೂಡಿದ್ದ ಅವನಿಗೆ ಮಾತ್ರ ಗೋಚರವಾಗಲಿಲ್ಲ. ಹೀಗಾಗಿ ಅವನ ಕೈಯಿಗೆ ಬಂದ ತುತ್ತು ಬಾಯಿಗೆ ದಕ್ಕಲಿಲ್ಲ.

	ಸುಮಾರು ಒಂದು ತಿಂಗಳ ಬಳಿಕ ಲೇವೇರ್ಯೇ ಬರ್ಲಿನ್ ವೇಧಶಾಲೆಯ ಗಾಲೆ ಎಂಬಾತನಿಗೆ ಹೊಸಗ್ರಹದ ಮಾಹಿತಿ ನೀಡಿ ಅದನ್ನು ಪತ್ತೆಮಾಡಲು ಕೋರಿಕೆ ಸಲ್ಲಿಸಿದ. 1848ರ ಸೆಪ್ಟೆಂಬರ್ 23ರಂದು ಈ ಕಾಗದ ಗಾಲೆಗೆ ಸಿಕ್ಕಿತು. ಒಡನೆ ಅವನು ಕುಂಭರಾಶಿವಾಲಯದ ಛಾಯಾಚಿತ್ರವನ್ನು ತೆಗೆದು ಆ ರಾತ್ರಿಯೇ ಗ್ರಹದ ಇರವನ್ನು ಸ್ಥಿರೀಕರಿಸಿದ. ಲೇವೇರೆಯೇ ಮುನ್ನುಡಿದಿದ್ದ ನೆಲೆಯಿಂದ 52' ಅಂತರದೊಳಗೆ ಇದು ಇತ್ತು. (ಆ್ಯಡಮ್ಸ್ ಮುನ್ನುಡಿದಿದ್ದ ನೆಲೆಯಿಂದ 2 ಡಿಗ್ರಿ ಅಂತರದೊಳಗೆ ಈ ಗ್ರಹವಿತ್ತು.) ಇದೇ ನೆಪ್ಚೂನ್ ಗ್ರಹ. ಇದರ ಆವಿಷ್ಕಾರದ ಕೀರ್ತಿ ಆ್ಯಡಮ್ಸ್ ಹಾಗೂ ಲೇವೇರ್ಯೇ ಇಬ್ಬರಿಗೂ ಸಮವಾಗಿ ಸಲ್ಲುತ್ತದೆ. ನ್ಯೂಟನ್ ಸಿದ್ಧಾಂತದ ಪ್ರಧಾನ ವಿಜಯಗಳ ಪೈಕಿ ನೆಪ್ಚೂನ್ ಆವಿಷ್ಕಾರವೂ ಸೇರಿದೆ.

	ಸೂರ್ಯನಿಂದ ಸುಮಾರು 30 ಖಮಾ (=44,966 ಲಕ್ಷ ಕಿಮೀ) ದೂರದಲ್ಲಿ ಸೆಕೆಂಡಿಗೆ (ಸರಾಸರಿ) 5.4 ಕಿಮೀ ವೇಗದಿಂದ ಸೂರ್ಯನನ್ನು ಪರಿಭ್ರಮಿಸುತ್ತಿರುವ ದೈತ್ಯಗ್ರಹವಿದು. ಇದರ ವರ್ಷದ (ಪರಿಭ್ರಮಣೆಯ) ಅವಧಿ 164.8 ವರ್ಷಗಳು ನೆಪ್ಚೂನ್ 1846ರಲ್ಲಿ ಪತ್ತೆ ಆಯಿತೆಂಬುದನ್ನು ಗಮನಿಸುವಾಗ ಅಲ್ಲಿಂದ ಈ ತನಕ (1280) ಅದು ಇನ್ನೂ ಒಮ್ಮೆ ಕೂಡಸೂರ್ಯನನ್ನು ಪರಿಭ್ರಮಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನೆಪ್ಚೂನಿನ ರಾಶಿ ಭೂಮಿಯದಕ್ಕಿಂತ 17.2 ಮತ್ತು ಗಾತ್ರ ಭೂಮಿಯದಕ್ಕಿಂತ 57 ಮಡಿ ದೊಡ್ಡದಾಗಿದೆ. ಆದರೆ ಸಾಂದ್ರತೆ ತೀರ ಕಡಿಮೆ 1.7; ಭೂಮಿಯದು 5.5. ಹೀಗಾಗಿ ನೆಪ್ಚೂನ್ ಕೂಡ ಗುರುಶನಿ ಹಾಗೂ ಯುರೇನಸುಗಳಂತೆ ಬಹುತೇಕ ಹಗುರ ಪದಾರ್ಥಗಳಿಂದಲೇ (ಘನೀಭವಿಸಿದ ಅನಿಲ) ಆಗಿರಬೇಕೆಂದು ಊಹೆ. ನೆಪ್ಚೂನಿಗೆ ವಾಯುಮಂಡಲವಿದೆ. ಮುಖ್ಯವಾಗಿ ಹೈಡ್ರೊಜನ್, ಹೀಲಿಯಮ್ ಮತ್ತು ಮೀಥೇನ್ ಇದರ ಘಟಕಗಳು. ವಾಯುಮಂಡಲದ ಉನ್ನತ ಸ್ತರದ ಉಷ್ಣತೆ 140 ಡಿಗ್ರಿ ಇರಬಹುದೆಂದು ಅಂದಾಜು.

	ಭೂಮಿ-ಗ್ರಹ-ನಕ್ಷತ್ರ ಏಕರೇಖಸ್ಥ ಆಗುವುದೊಂದು ಅಪೂರ್ವ ಹಾಗೂ ವಿಶೇಷ ವಿದ್ಯಮಾನ. ಭೂಮಿಯಿಂದ ನೋಡುವವರಿಗೆ ಆಗ ಗ್ರಹದಿಂದ ನಕ್ಷತ್ರದ ಗ್ರಹಣವಾಗುತ್ತದೆ. ಅರ್ಥಾತ್ ನಕ್ಷತ್ರಗ್ರಹದ ಹಿಂಬದಿಯಲ್ಲಿ ಕೊಂಚ ಕ್ಷಣ ಮರೆಯಾಗಿ ಮತ್ತೆ ಕಾಣಿಸಿಕೊಳ್ಳುವುದು. ಇದಕ್ಕೆ ಆ ನಕ್ಷತ್ರದ ಸಂಕ್ರಮಣವೆಂದು ಹೆಸರು. 1968ರಲ್ಲಿ ನೆಪ್ಚೂನಿನಿಂದ ಸಂಭವಿಸಿದ ಉತ್ಕøಷ್ಟ ನಕ್ಷತ್ರ ಸಂಕ್ರಮವೊಂದನ್ನು  ಖಗೋಳ ವೀಕ್ಷಕರು ನಿಕೃಷ್ಟವಾಗಿ ಅಳೆದರು. ಆಗ ಲಭಿಸಿದ ಮಾಹಿತಿಗಳ ಆಧಾರದಿಂದ ನೆಪ್ಚೂನಿನ ವ್ಯಾಸ 49500 ಕಿಮಿ ಎಂದು ನಿರ್ಧರಿಸಲಾಗಿದೆ. ನೆಪ್ಚೂನಿಗೆ ಎರಡು ಉಪಗ್ರಹಗಳಿವೆ. ಅವುಗಳ ಪೈಕಿ ಒಂದರ ಹೆಸರು ಟೈಟ್ರನ್. ನೆಪ್ಚೂನಿನ ಕೇಂದ್ರ ಬಿಂದುವಿನಿಂದ ಟೈಟ್ರನ್ 3,53,980 ಕಿ.ಮಿ. ದೂರದಲ್ಲಿದೆ. ಎರಡನೆಯದು 16,09,900 ರಿಂದ 96,54,000 ಕಿಮಿ. ನಡುವೆ ತೊನೆದಾಡುತ್ತಿದೆ. ಗಾತ್ರದಲ್ಲಿ ಟೈಟ್ರನ್ ಚಂದ್ರನಿಗಿಂತ ದೊಡ್ಡದು.

	ನೆಪ್ಚೂನ್ ಗ್ರಹವನ್ನು ಕುರಿತು ಕೆಲವು ಮುಖ್ಯ ಅಂಕೆ ಅಂಶಗಳು ಇಲ್ಲಿ ಬರೆದಿವೆ. ಹೋಲಿಕೆಗೆ ಅನುಕೂಲವಾಗಲಿ ಎಂಬ ದೃಷ್ಡಿಯಿಂದ ಭೂಮಿಯನ್ನು ಕುರಿತು ಸಂವಾದೀ ಅಂಕೆ ಅಂಶಗಳನ್ನು ಆವರಣದಲ್ಲಿ ಕಾಣಿಸಿದೆ.

	ಸೂರ್ಯ-ನೆಪ್ಚೂನ್ ಗರಿಷ್ಠ ದೂರ (ದ.ಲ.ಕಿಮೀ.ಗಳಲ್ಲಿ)     4537 (152.1)
	ಕನಿಷ್ಠ ದೂರ                              .. .. .4456 (147.1)
	ಸೂರ್ಯ-ನೆಪ್ಚೂನ್ ಸರಾಸರಿ ಅಂತರ
	(ದ.ಲ.ಕಿಮೀಗಳಲ್ಲಿ)                          .. .. .4496.6 (149.6)
	ಖಗೋಳಮಾನಗಳಲ್ಲಿ                        .. .. ..30.06 (1)
	ಸೂರ್ಯನ ಸುತ್ತ ಪರಿಭ್ರಮಿಸಲು ಬೇಕಾಗುವ        .. .. . 164.8 ಭೂಮಿ ವರ್ಷಗಳು (365.24 
	ಅವಧಿ (ವರ್ಷ)                                 ದಿವಸಗಳು)
	ಸ್ವಂತಾಕ್ಷನ ಸುತ್ತ ಆವರ್ತಿಸಲು ಬೇಕಾಗುವ 
	ಅವಧಿ (ದಿವಸ)                            .. .. . 16 ಭೂಮಿ ಗಂಟೆಗಳು (23 ಗಂ 56 ಮಿ 
                                                   4ಸೆ)
	ಸರಾಸರಿ ಕಕ್ಷಾವೇಗ (ಸೆಕೆಂಡಿಗೆ ಕಿಮೀ)             .. .. .. 5.4 (29.8)
	ಅಕ್ಷದ ಬಾಗು                               .. .. ..28º 48 (23º 27)
	ಕ್ರಾಂತಿವೃತ್ತ ತಲಕ್ಕೆ ಗ್ರಹಕಕ್ಷಾತಲದ ಬಾಗು            .. .. .. 1.8º (0)
	ಕಕ್ಷೆಯ ಉತ್ಕೇಂದ್ರತೆ                          .. .. .. 0.009 (0.017)
	ಸಮಭಾಜಕೀಯ ವ್ಯಾಸ (ಕಿಮೀ)                 .. .. ..49,500 (12,756)
	ರಾಶಿ (ಭೂಮಿ=1)                          .. .. .. 17.2 (1)
	ಘನಗಾತ್ರ (ಭೂಮಿ=1)                       .. .. ..57(1)
	ಸಾಂದ್ರತೆ (ನೀರು=1)                         .. .. ..1.7 (5.5)
	ಚಪ್ಪಟೆತನ                                 .. .. ..0.02 (0.003)
	ವಾಯುಮಂಡಲದ ಪ್ರಧಾನ ಘಟಕಗಳು            .. .. .. ಹೈಡ್ರೊಜನ್, ಹೀಲಿಯಮ್, ಮೀಥೇನ್ 
                                                (ನೈಟ್ರೊಜನ್, ಆಕ್ಸಿಜನ್)
	ಮೇಲ್ಮೈ ಗುರುತ್ವ (ಭೂಮಿ=1)                  .. .. ..1.18(1)
	ಗ್ರಹದಿಂದ ನೋಡಿದಾಗ ಕಾಣುವ ಸೂರ್ಯನ
	ಸರಾಸರಿ ತೋರ್ಕೆ ವ್ಯಾಸ                       .. .. ..1 04” (31 59”)
	ಗೊತ್ತಿರುವ ಉಪಗ್ರಹಗಳು                       .. .. ..2 (1)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ